ಭಟ್ಕಳ ಡೈರಿ ವರದಿ
ಭಟ್ಕಳ: ವಯಸ್ಸು ಕೇವಲ ಹದಿಮೂರು. ಓದುತ್ತಿರುವುದು ೮ನೇ ತರಗತಿ. ಆದರೆ ಚಿಂತನೆ, ಕಲ್ಪನೆ ಮತ್ತು ಬರವಣಿಗೆಯ ಆಸಕ್ತಿಯಲ್ಲಿ ಈ ಬಾಲಕಿ ಈಗಾಗಲೇ ದೊಡ್ಡ ಹೆಜ್ಜೆಯಿಟ್ಟಿದ್ದಾಳೆ. ಕಾಶಿಯ ಪ್ರವಾಸದ ಅನುಭವವನ್ನು ಪುಸ್ತಕ ರೂಪಕ್ಕೆ ತಂದು, ತನ್ನ ಮೊದಲ ಕೃತಿಯನ್ನು ಪ್ರಕಟಿಸಿರುವ ಉತ್ತರ ಕನ್ನಡ ಜಿಲ್ಲೆಯ ಮೂಲದ ಮನಸ್ವಿ ಶೆಟ್ಟಿ ಇದೀಗ ಗಮನ ಸೆಳೆದಿದ್ದಾರೆ.
ಬೆಂಗಳೂರಿನ ಕೊರಮಂಗಲದಲ್ಲಿ ಅಕ್ಟೋಬರ್ ೨೫ರಂದು ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮನಸ್ವಿ ಶೆಟ್ಟಿ ಅವರ ‘A Little Less Certain’ ಕೃತಿಯೂ ಬಿಡುಗಡೆಯಾಯಿತು. ಸುಮಾರು ೪೫ ಪುಟಗಳ ಈ ಪುಟ್ಟ ಕೃತಿ ಕಾಶಿಯ ಪ್ರವಾಸದ ಅನುಭವ, ಅಲ್ಲಿನ ವಾತಾವರಣ ಹಾಗೂ ಬಾಲಕಿಯ ಒಳನೋಟಗಳನ್ನು ಕಥನ ರೂಪದಲ್ಲಿ ಕಟ್ಟಿಕೊಡುತ್ತದೆ.
ಗೋಕರ್ಣ ಮೂಲದ ಸಂದೇಶ್ ಶೆಟ್ಟಿ ಹಾಗೂ ಭಟ್ಕಳದ ರೂಪಾ ಶೆಟ್ಟಿ ದಂಪತಿಯ ಪುತ್ರಿಯಾಗಿರುವ ಮನಸ್ವಿ, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ದೆಹಲಿ ಪಬ್ಲಿಕ್ ಸ್ಕೂಲ್ನಲ್ಲಿ ೮ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಕಾಶಿ ಪ್ರವಾಸದಿಂದ ಪುಸ್ತಕದವರೆಗೆ:
ಕಳೆದ ಡಿಸೆಂಬರ್ನಲ್ಲಿ ಕಾಶಿಗೆ ಭೇಟಿ ನೀಡಿದ್ದ ಮನಸ್ವಿ, ಅಲ್ಲಿನ ದೇವಾಲಯಗಳು, ಗಂಗಾ ನದಿ, ದೋಣಿ ವಿಹಾರ ಹಾಗೂ ಜನಜೀವನವನ್ನು ವಿಭಿನ್ನ ದೃಷ್ಟಿಕೋನದಿಂದ ಗಮನಿಸಿದ್ದಾರೆ. ಈ ಅನುಭವಗಳೇ ಮುಂದೆ ‘A Little Less Certain’ ಕೃತಿಗೆ ರೂಪ ನೀಡಿವೆ.
ಕಾಶಿಯ ಗದ್ದಲ, ಅಸ್ತವ್ಯಸ್ತತೆ ಮತ್ತು ಅದೇ ಸಮಯದಲ್ಲಿ ಕಾಣಿಸಿಕೊಳ್ಳುವ ಶಾಂತಿಯ ನಡುವಿನ ವೈರುಧ್ಯವನ್ನು ಕೃತಿ ತೆರೆದಿಡುತ್ತದೆ. ಶಾಂತಿ ಎನ್ನುವುದು ಹುಡುಕಿಕೊಂಡು ಹೋಗುವ ಸ್ಥಳವಲ್ಲ; ಜೀವನದೊಂದಿಗೆ ಸಾಗಿಸಿಕೊಳ್ಳುವ ಅನುಭವ ಎಂಬ ಆಲೋಚನೆಯತ್ತ ಕೃತಿ ಓದುಗರನ್ನು ಕರೆದೊಯ್ಯುತ್ತದೆ. ಸುಲಭವಾದ ಉತ್ತರಗಳಿಲ್ಲದ ಪ್ರಶ್ನೆಗಳೊಂದಿಗೆ ಬದುಕುವುದನ್ನು ಕಲಿಯುವ ಹದಿಮೂರು ವರ್ಷದ ಬಾಲಕಿಯ ಒಳಜಗತ್ತನ್ನು ಸರಳ ಹಾಗೂ ಪ್ರಾಮಾಣಿಕವಾಗಿ ಕಟ್ಟಿಕೊಡುವ ಪ್ರಯತ್ನ ಇದಾಗಿದೆ.
ಬರವಣಿಗೆಯ ಜೊತೆಗೆ ಹಲವು ಆಸಕ್ತಿಗಳು: ಮನಸ್ವಿಗೆ ಓದು, ಬರವಣಿಗೆ ಹಾಗೂ ಹೊಸ ಆಲೋಚನೆಗಳನ್ನು ಅನ್ವೇಷಿಸುವುದರಲ್ಲಿ ವಿಶೇಷ ಆಸಕ್ತಿ ಇದೆ. ಇತಿಹಾಸ ಮತ್ತು ಪೌರಾಣಿಕ ಕಥೆಗಳ ಬಗ್ಗೆ ಕುತೂಹಲ ಹೊಂದಿರುವ ಅವರು ತಮ್ಮ ಆಲೋಚನೆ ಮತ್ತು ಕಲ್ಪನೆಗಳನ್ನು ಕಥೆಗಳ ರೂಪದಲ್ಲಿ ವ್ಯಕ್ತಪಡಿಸಲು ಇಷ್ಟಪಡುತ್ತಾರೆ. ಬರವಣಿಗೆಯ ಹೊರತಾಗಿ ಬಾಸ್ಕೆಟ್ಬಾಲ್ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿಯೂ ಮನಸ್ವಿ ಆಸಕ್ತಿ ಹೊಂದಿದ್ದಾರೆ.
ಭಟ್ಕಳದ ಚಿಣ್ಣರ ಮೇಳದಲ್ಲೂ ಸಕ್ರಿಯ:
ಬೆಂಗಳೂರಿನಂತಹ ನಗರ ಪ್ರದೇಶದಲ್ಲಿ ಬೆಳೆದರೂ ಭಟ್ಕಳದೊಂದಿಗೆ ಮನಸ್ವಿಗೆ ಉತ್ತಮ ನಂಟಿದೆ. ಕಳೆದ ಬೇಸಿಗೆ ರಜೆಯಲ್ಲಿ ಭಟ್ಕಳದ ಡಿ.ಪಿ. ಕಾಲೋನಿಯಲ್ಲಿರುವ ಅಜ್ಜನ ಮನೆಗೆ ಬಂದಿದ್ದ ಭಟ್ಕಳದ ಮೊಮ್ಮಗಳು ಗುರು ಸುಧೀಂದ್ರ ಕಾಲೇಜಿನಲ್ಲಿ ನಡೆದ ‘ಚಿಣ್ಣರ ಮೇಳ-೩’ರಲ್ಲಿ ಭಾಗವಹಿಸಿದ್ದರು. ನಾಟಕ, ನೃತ್ಯ, ಭಜನೆ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿದ್ದ ಮನಸ್ವಿ, ಶಿಬಿರದಲ್ಲಿದ್ದವರ ಮೆಚ್ಚುಗೆಗೂ ಪಾತ್ರರಾಗಿದ್ದರು. ನಗರದ ಶಾಲೆಯಲ್ಲಿ ಓದುತ್ತಿದ್ದರೂ ಸ್ಥಳೀಯ ಮಕ್ಕಳೊಂದಿಗೆ ಬೆರೆತು ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದರು.
ಯುವ ಬರಹಗಾರರಿಗೆ ವೇದಿಕೆ:
ಮನಸ್ವಿಯ ಮೊದಲ ಕೃತಿಗೆ ‘Learner Circle Young Authors Programme’ ವೇದಿಕೆಯೂ ನೆರವಾಗಿದೆ. ಸೃಜನಶೀಲ ಬರವಣಿಗೆಯಲ್ಲಿ ಆಸಕ್ತಿ ಹೊಂದಿರುವ ಮಕ್ಕಳು ಮತ್ತು ಹದಿಹರೆಯದವರಿಗೆ ತಮ್ಮ ಆಲೋಚನೆಗಳನ್ನು ಕಥೆಯ ರೂಪಕ್ಕೆ ತರಲು ಈ ಕಾರ್ಯಕ್ರಮ ಮಾರ್ಗದರ್ಶನ ನೀಡುತ್ತದೆ.
ಚಿಕ್ಕ ವಯಸ್ಸಿನಲ್ಲೇ ಪ್ರವಾಸದ ಅನುಭವವನ್ನು ಪುಸ್ತಕವಾಗಿ ರೂಪಿಸಿ, ತನ್ನದೇ ಆದ ಬರವಣಿಗೆಯ ಲೋಕಕ್ಕೆ ಕಾಲಿಟ್ಟಿರುವ ಮನಸ್ವಿ ಶೆಟ್ಟಿಯ ಸಾಧನೆ ಭಟ್ಕಳದ ಪಾಲಿಗೂ ಹೆಮ್ಮೆಯ ವಿಚಾರವಾಗಿದೆ. ಓದು, ಅನುಭವ ಮತ್ತು ಕಲ್ಪನೆಗಳನ್ನು ಅಕ್ಷರಗಳಾಗಿ ರೂಪಿಸುವ ಮನಸ್ವಿಯ ಈ ಪ್ರಯತ್ನ, ಬರವಣಿಗೆಯ ಕನಸು ಕಾಣುತ್ತಿರುವ ಇತರ ಮಕ್ಕಳಿಗೂ ಸ್ಫೂರ್ತಿಯಾಗಲಿ ಎಂಬುದು ‘ಭಟ್ಕಳ ಡೈರಿ’ ಆಶಯ.
ಇದನ್ನೂ ಓದಿ :
ಗಾಣಿಗ ಸಮಾಜದ ಪ್ರತಿಭೆ – ಸಾಧನೆಗೆ ಭಟ್ಕಳದಲ್ಲಿ ಸನ್ಮಾನದ ಸ್ಪರ್ಶ
ಸರ್ಪನಕಟ್ಟೆಯಲ್ಲಿ ‘ಸಂಭವಾಮಿ ಯುಗೇ ಯುಗೇ’ ಪೋಸ್ಟರ್ ಬಿಡುಗಡೆ; ದೈವ ಸಂಕಲ್ಪ ಕಲಾ ಬಳಗದ ಹೊಸ ನಾಟಕಕ್ಕೆ ಭರ್ಜರಿ ಸಿದ್ಧತೆ




