ಭಟ್ಕಳ ಡೈರಿ ವರದಿ
ಭಟ್ಕಳ: ದಸರಾ ಸಿಎಂ ಕಪ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಎಐಟಿಎಂ-ಎಂಬಿಎ ಅಂತಿಮ ವರ್ಷದ ವಿದ್ಯಾರ್ಥಿ ಪ್ರವೀಣ ರವಿ ಹರಿಜನ ಚಿನ್ನದ ಪದಕ ಗೆದ್ದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ರಾಜ್ಯ ಸರ್ಕಾರದ ವತಿಯಿಂದ ಸೆಪ್ಟೆಂಬರ್ ೩೦ರಂದು ವಿಜಯಪುರದಲ್ಲಿ ಆಯೋಜಿಸಿದ್ದ ವಿಭಾಗೀಯ ಮಟ್ಟದ ದಸರಾ ಸಿಎಂ ಕಪ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಪ್ರವೀಣ ರವಿ ಹರಿಜನ ಅತ್ಯುತ್ತಮ ಪ್ರದರ್ಶನ ನೀಡಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಈ ಸಾಧನೆಯೊಂದಿಗೆ ಮೈಸೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಮೈಸೂರು ದಸರಾ ಸಿಎಂ ಕಪ್ ಕರಾಟೆ ಚಾಂಪಿಯನ್‌ಶಿಪ್‌ಗೆ ಅವರು ಆಯ್ಕೆಯಾಗಿದ್ದಾರೆ.
ಸತತ ಎರಡನೇ ದೊಡ್ಡ ಸಾಧನೆ:
ಪ್ರವೀಣ ರವಿ ಹರಿಜನ ಅವರ ಈ ಸಾಧನೆ ಸತತ ಎರಡನೇ ದೊಡ್ಡ ಯಶಸ್ಸಾಗಿದೆ. ಇದಕ್ಕೂ ಮೊದಲು ಬೆಂಗಳೂರಿನ ಆರ್‌ವಿಸಿಎ ಕಾಲೇಜಿನಲ್ಲಿ ನಡೆದ ವಿಟಿಯು ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಅವರು ಚಿನ್ನದ ಪದಕ ಗೆದ್ದಿದ್ದರು. ಈ ಮೂಲಕ ಚೆನ್ನೈನ ಬಿ ಎಸ್ ಅಬ್ದುರ್ ರಹಮಾನ್ ಕ್ರೆಸೆಂಟ್ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ದಕ್ಷಿಣ ವಲಯ ಅಂತರ-ವಿಶ್ವವಿದ್ಯಾಲಯ ಕರಾಟೆ ಚಾಂಪಿಯನ್‌ಶಿಪ್‌ಗೆ ಅವರು ಆಯ್ಕೆಯಾಗಿದ್ದರು.
ಪ್ರವೀಣ ರವಿ ಹರಿಜನ ಅವರ ಈ ಅತ್ಯುತ್ತಮ ಸಾಧನೆಗೆ ಎಐಟಿಎಂ ಭಟ್ಕಳದ ಆಡಳಿತ ಮಂಡಳಿ, ಪ್ರಾಂಶುಪಾಲರು, ವಿಭಾಗದ ಮುಖ್ಯಸ್ಥರು ಹಾಗೂ ಎಂಬಿಎ ವಿಭಾಗದ ಬೋಧಕ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ. ರಾಜ್ಯ ಮಟ್ಟದ ಮೈಸೂರು ದಸರಾ ಸಿಎಂ ಕಪ್‌ನಲ್ಲಿ ಪ್ರವೀಣ ಮತ್ತಷ್ಟು ಯಶಸ್ಸು ಸಾಧಿಸಲಿ ಎಂದು ಸಂಸ್ಥೆಯ ವತಿಯಿಂದ ಶುಭ ಹಾರೈಸಲಾಗಿದೆ.
ಇದನ್ನೂ ಓದಿ :
ಮುರ್ಡೇಶ್ವರದಲ್ಲಿ ಮನೆ ಬಾಗಿಲು ಮುರಿದು ಕಳ್ಳತನ: ೧೭.೫ ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದು ದೋಚಿದ ಕಳ್ಳರು


