ಭಟ್ಕಳ ಡೈರಿ ವರದಿ

ಮುರ್ಡೇಶ್ವರ: ಮನೆಯವರು ಕಾಲೇಜಿಗೆ ತೆರಳಿದ್ದ ವೇಳೆ ಹಿಂಬದಿಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಕಬಾಟು ಒಡೆದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದು ಹಣ ಕಳ್ಳತನ ಮಾಡಿರುವ ಘಟನೆ ಕಾಯ್ಕಿಣಿ ಗ್ರಾಮದ ಅಗ್ಲೊಳೆ ಸಮೀಪದ ಕೊಟದಮಕ್ಕಿ ರಸ್ತೆಯಲ್ಲಿ ನಡೆದಿದೆ. ಘಟನೆ ಕುರಿತು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಕಳ್ಳರ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.

ದೂರಿನ ಪ್ರಕಾರ, ಅಗ್ಲೊಳೆಯ ಕೊಟದಮಕ್ಕಿ ರಸ್ತೆ ನಿವಾಸಿ, ಉಪನ್ಯಾಸಕ ರಾಜೇಶ ಕುಪ್ಪಯ್ಯ ಶೆಟ್ಟಿ ಅವರು ಅಕ್ಟೋಬರ್ ೧ರಂದು ಬೆಳಿಗ್ಗೆ ಪತ್ನಿಯೊಂದಿಗೆ ಕಾಲೇಜಿಗೆ ತೆರಳಿದ್ದರು. ಬೆಳಿಗ್ಗೆ ಸುಮಾರು ೮.೪೫ರಿಂದ ೧೧.೫೫ ಗಂಟೆಯ ನಡುವಿನ ಅವಧಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಕಳ್ಳರು ಮನೆಯ ಹಿಂಬದಿಯ ಬಾಗಿಲನ್ನು ಗಟ್ಟಿಯಾದ ಆಯುಧದಿಂದ ಮುರಿದು ಒಳನುಗ್ಗಿದ್ದಾರೆ ಎನ್ನಲಾಗಿದೆ. ನಂತರ ಮಲಗುವ ಕೋಣೆಯಲ್ಲಿದ್ದ ಕಬಾಟಿನ ಬಾಗಿಲನ್ನು ಮುರಿದು, ಅದರಲ್ಲಿದ್ದ ಸುಮಾರು ೧೩.೫ ಲಕ್ಷ ರೂ ಮೌಲ್ಯದ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅದೇ ರೀತಿ ಮತ್ತೊಂದು ಕಬಾಟಿನಲ್ಲಿ ಇರಿಸಲಾಗಿದ್ದ ಸುಮಾರು ೩ ಲಕ್ಷ ರೂ ನಗದು ಹಣವನ್ನೂ ಕಳ್ಳರು ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಮನೆಯಲ್ಲಿದ್ದ ಸುಮಾರು ೧ ಲಕ್ಷ ರೂ ಮೌಲ್ಯದ ಬೆಳ್ಳಿ ತಂಬಿಗೆಯೂ ಕಳ್ಳತನವಾಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಒಟ್ಟಾರೆ ಸುಮಾರು ೧೭.೫ ಲಕ್ಷ ರೂ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದು ಹಣ ಕಳ್ಳತನವಾಗಿರುವುದಾಗಿ ಪೊಲೀಸರು ದಾಖಲಿಸಿರುವ ದೂರಿನಲ್ಲಿ ತಿಳಿಸಲಾಗಿದೆ.

ಮನೆಯ ಬಾಗಿಲು ಮುರಿದು ಒಳನುಗ್ಗಿ ಕಳ್ಳತನ ಮಾಡಿರುವ ಆರೋಪಿಗಳ ಪತ್ತೆಗೆ ಮುರ್ಡೇಶ್ವರ ಪೊಲೀಸರು ತನಿಖೆ ಕೈಗೊಂಡಿದ್ದು, ಘಟನಾ ಸ್ಥಳದಲ್ಲಿನ ಸುಳಿವುಗಳು ಹಾಗೂ ಲಭ್ಯವಿರುವ ಇತರ ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರುದಾರರು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ :

ಭಟ್ಕಳದಲ್ಲಿ ಬಂಗಾರದ ಬಳೆ, ನಗದು ಕಳವು ಆರೋಪ

ಕುಂದಾಪುರ: ೧೮ ವರ್ಷದ ಯುವಕ ನಾಪತ್ತೆ; ಪತ್ತೆಗೆ ಸಾರ್ವಜನಿಕರ ಸಹಕಾರ ಕೋರಿಕೆ