ಭಟ್ಕಳ ಡೈರಿ ವರದಿ

ಮುರುಡೇಶ್ವರ: ಮನೆಗಳಲ್ಲಿ ಪುರುಷರು ಇಲ್ಲದಿರುವುದನ್ನು ಗಮನಿಸಿ ಕಳ್ಳತನಕ್ಕೆ ಸಂಚು ರೂಪಿಸಲಾಗುತ್ತಿದೆಯೇ? ಮುರುಡೇಶ್ವರ ಸಮೀಪದ ಕೈಕಿಣಿ ಹೆರಾಡಿ ಪ್ರದೇಶದಲ್ಲಿ ಮಧ್ಯರಾತ್ರಿ ಮನೆ ಬಾಗಿಲು ತಟ್ಟುತ್ತಾ ಅನುಮಾನಾಸ್ಪದವಾಗಿ ಓಡಾಡುತ್ತಿರುವ ಅಪರಿಚಿತರ ಗುಂಪೊಂದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಶುಕ್ರವಾರ ತಡರಾತ್ರಿ ಸುಮಾರು ಐದರಿಂದ ಆರು ಮಂದಿ ಅಪರಿಚಿತರು ಮನೆಯೊಂದರ ಸುತ್ತಮುತ್ತ ಓಡಾಡುತ್ತಿರುವ ದೃಶ್ಯ ಪಕ್ಕದ ಮನೆಯೊಂದರಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮನೆಯ ಬಾಗಿಲನ್ನೂ ತಟ್ಟಿದ ಈ ಗುಂಪು, ಒಳಗಿದ್ದ ಮಹಿಳೆ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಅಲ್ಲಿಂದ ತೆರಳಿದೆ ಎನ್ನಲಾಗಿದೆ. ಮನೆಯಲ್ಲಿ ಇಬ್ಬರು ಮಕ್ಕಳೊಂದಿಗೆ ಮಹಿಳೆಯೊಬ್ಬರೇ ವಾಸವಿರುವುದನ್ನು ಗಮನಿಸಿ ಕಳ್ಳತನಕ್ಕೆ ಸಂಚು ರೂಪಿಸಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.

ಹೈದರಾಬಾದ್‌ನ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿರುವ ಕೃಷ್ಣ ನಾಯ್ಕ ಅವರಿಗೆ ಸೇರಿದ ಮನೆಯಿದು. ಅವರ ಪತ್ನಿ ಹೇಮಾ ಕಳೆದ ಒಂದು ವರ್ಷದಿಂದ ಇಬ್ಬರು ಮಕ್ಕಳೊಂದಿಗೆ ಇಲ್ಲಿ ವಾಸವಾಗಿದ್ದಾರೆ. ರಾತ್ರಿ ಬಾಗಿಲು ತಟ್ಟಿದ ಸದ್ದು ಕೇಳಿದ್ದರೂ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಬಳಿಕವೇ ಘಟನೆಯ ಗಂಭೀರತೆ ಅರಿವಿಗೆ ಬಂತು ಎಂದು ಹೇಮಾ ತಿಳಿಸಿದ್ದಾರೆ.

ಕಳೆದ ಎರಡು-ಮೂರು ವರ್ಷಗಳಿಂದ ಕೈಕಿಣಿ ಪ್ರದೇಶದಲ್ಲಿ ಮನೆ ಕಳ್ಳತನದ ಹಲವು ಪ್ರಕರಣಗಳು ವರದಿಯಾಗಿವೆ. ಕೆಲವು ಪ್ರಕರಣಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಕಳವಾಗಿವೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾತ್ರಿ ಗಸ್ತು ಹೆಚ್ಚಿಸುವುದು ಹಾಗೂ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನಗಳ ಮೇಲೆ ನಿಗಾ ಇರಿಸುವಂತೆ ಸಾರ್ವಜನಿಕರು ಪೊಲೀಸರನ್ನು ಒತ್ತಾಯಿಸಿದ್ದಾರೆ.

ಘಟನೆ ಬೆನ್ನಲ್ಲೇ ಸೋಮವಾರದಿಂದಲೇ ಕೈಕಿಣಿ ಪ್ರದೇಶದಲ್ಲಿ ರಾತ್ರಿ ಭದ್ರತೆಗಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ರಾತ್ರಿ ಗಸ್ತನ್ನೂ ಹೆಚ್ಚಿಸಲಾಗಿದೆ. ಮಧ್ಯರಾತ್ರಿ ಮನೆಗಳ ಬಾಗಿಲು ತಟ್ಟುವ ಅಪರಿಚಿತರ ಚಲನವಲನಗಳು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಪೊಲೀಸ್ ಗಸ್ತು ಮತ್ತಷ್ಟು ಪರಿಣಾಮಕಾರಿಯಾಗಬೇಕು ಎಂಬುದು ನಿವಾಸಿಗಳ ಆಗ್ರಹವಾಗಿದೆ.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ :

ಭಟ್ಕಳದಲ್ಲಿ ಕಾಡುಪ್ರಾಣಿಗಳ ಉಪಟಳ: ಜಾನುವಾರುಗಳೇ ಗುರಿ, ಮನುಷ್ಯರಿಗೂ ಕಂಟಕ

ನೇತ್ರಾಣಿ ಬಳಿಕ ಹೊಗ್ ಐಲ್ಯಾಂಡ್, ಕಿರಿ ಕುಂಡದತ್ತ ಪ್ರವಾಸೋದ್ಯಮದ ಕಣ್ಣು: ಭಟ್ಕಳದ ಕರಾವಳಿಗೆ ಬರುತ್ತಾರೆಯೇ ಅಂತಾರಾಷ್ಟ್ರೀಯ ಪ್ರವಾಸಿಗರು?