Guru Poornima Special
ಕಲಿಕೆ ಎಂಬುದು ನಿಂತ ನೀರಲ್ಲ, ಸದಾ ಹರಿಯುತ್ತಿರುವ ಜೀವ ಗಂಗೆ. ಪ್ರತಿಯೊಬ್ಬ ಮನುಷ್ಯ ಹುಟ್ಟಿನಿಂದ ಸಾಯುವವರೆಗೆ ಜೀವನದುದ್ದಕ್ಕೂ ಒಂದಿಲ್ಲೊಂದು ಹೊಸತನ್ನು ಕಲಿಯುತ್ತಲೇ ಇರುತ್ತಾನೆ. ಆತ ಕಲಿಯುವ ಪ್ರತಿಯೊಂದು ವಿಷಯದ ಹಿಂದೆಯೂ ಒಬ್ಬ ಗುರು ಇರುತ್ತಾನೆ. ಹಾಗಾಗಿಯೇ,
“ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರ, ಗುರು ಸಾಕ್ಷಾತ್ ಪರಬ್ರಹ್ಮ…’ ಎಂದು ಆರಾಧಿಸಲಾಗುತ್ತದೆ. ತಂದೆ, ತಾಯಿಯ ನಂತರದ ಉನ್ನತ ಸ್ಥಾನ ಗುರುವಿಗೆ.
ಗುರುವನ್ನು ಬ್ರಹ್ಮ, ವಿಷ್ಣು, ಮಹೇಶ್ವರ ಎಂದು ಪೂಜಿಸುವ ಸಂಸ್ಕೃತಿ ಭಾರತದ್ದು. ‘ಗು’ ಎಂದರೆ ಕತ್ತಲು ‘ರು’ ಎಂದರೆ ತೆಗೆಯುವುದು. ಅಂದರೆ ಅಜ್ಞಾನವೆಂಬ ಕತ್ತಲನ್ನು ಹೋಗಲಾಡಿಸುವವನೇ ಗುರು ಎಂದರ್ಥ. ಭಾರತದಲ್ಲಿ ಅನಾದಿ ಕಾಲದಿಂದಲೂ ಗುರುಗಳನ್ನು ದೇವರಂತೆ ಪೂಜಿಸುವ ಸಂಪ್ರದಾಯ ಬೆಳೆದು ಬಂದಿದೆ. ಗುರು ಪೂರ್ಣಿಮೆಯಂದು ಗುರುಗಳನ್ನು ಸ್ಮರಿಸುವುದರಿಂದ ತ್ರಿಮೂರ್ತಿಗಳನ್ನು ಪೂಜಿಸಿದ ಪುಣ್ಯ ಲಭಿಸುತ್ತದೆ ಎಂಬುದು ಈ ನೆಲದ ನಂಬಿಕೆ.
ಮಹರ್ಷಿ ವೇದವ್ಯಾಸರು ಸುಮಾರು 3,000 ವರ್ಷಗಳ ಹಿಂದೆ ಆಷಾಢ ಶುಕ್ಲ ಪಕ್ಷದ ಹುಣ್ಣಿಮೆಯಂದು ಜನಿಸಿದರೆಂದು ಹೇಳಲಾಗುತ್ತದೆ. ವೇದವ್ಯಾಸರು ತಮ್ಮ ಬಾಲ್ಯದಲ್ಲೊಮ್ಮೆ ತಮ್ಮ ತಂದೆ-ತಾಯಿಯ ಬಳಿ ದೇವರನ್ನು ಕಾಣುವ ಬಯಕೆ ವ್ಯಕ್ತಪಡಿಸಿದಾಗ, ತಾಯಿ ಸತ್ಯವತಿ ವೇದವ್ಯಾಸರ ಬಯಕೆ ತಿರಸ್ಕರಿಸಿದರಂತೆ. ಆಗ ವೇದವ್ಯಾಸರು ದೇವರನ್ನು ತೋರಿಸಲೇ ಬೇಕು ಎಂದು ಹಠ ಮಾಡಿದರಂತೆ. ಇದರಿಂದ ಬೇಸರಗೊಂಡ ಅವರ ತಾಯಿ ಸತ್ಯವತಿ ಅವನನ್ನು ಕಾಡಿಗೆ ಹೋಗಲು ಆದೇಶಿಸುತ್ತಾರೆ. ಯಾವಾಗ ಮನೆಯ ನೆನಪಾಗುತ್ತೋ ಆಗ ಮನೆಗೆ ಬಾ ಎಂದು ಹೇಳಿದರಂತೆ. ಇದಾದ ನಂತರ ವೇದವ್ಯಾಸರು ಕಾಡಿಗೆ ಹೋಗಿ ಕಠಿಣ ತಪಸ್ಸು ಕೈಗೊಂಡರಂತೆ. ಅಪಾರ ಜ್ಞಾನ ಸಂಪಾದಿಸಿದರಂತೆ.
ವೇದವ್ಯಾಸರು ಸಂಸ್ಕೃತ ಭಾಷೆಯಲ್ಲಿ ಪ್ರಾವೀಣ್ಯತೆ ಪಡೆದು, ಅದರ ನಂತರ ಅವರು ನಾಲ್ಕು ವೇದಗಳನ್ನು ವಿಸ್ತರಿಸಿ ಶ್ರೀಮದ್ ಭಾಗವತ, ಮಹಾಭಾರತ, ಹದಿನೆಂಟು ಮಹಾಪುರಾಣಗಳನ್ನು ಒಳಗೊಂಡಂತೆ ಬ್ರಹ್ಮಸೂತ್ರ ರಚಿಸಿದರು. ಮಹರ್ಷಿ ವೇದವ್ಯಾಸರು ಎಲ್ಲ ನಾಲ್ಕು ವೇದಗಳ ಜ್ಞಾನವನ್ನು ಹೊಂದಿದ್ದ ಕಾರಣ ಮೊದಲ ಗುರುವೆಂಬ ಸ್ಥಾನ ಪಡೆದರು. ನಾಲ್ಕು ವೇದಗಳನ್ನು ರಚಿಸಿ ಮನುಕುಲಕ್ಕೆ ಆಧ್ಯಾತ್ಮಿಕ ಪರಂಪರೆಯನ್ನು ಬಿಟ್ಟುಕೊಟ್ಟಿದ್ದರಿಂದ ಅವರ ನೆನಪಿಗಾಗಿ ಅವರ ಆರಾಧನಾ ದಿನವಾಗಿ ಗುರು ಪೂರ್ಣಿಮೆ ಆಚರಿಸುವ ಸಂಪ್ರದಾಯ ಪ್ರಾರಂಭವಾಯಿತು ಎಂದು ಪುರಾಣಗಳಲ್ಲಿ ಹೇಳಲಾಗಿದೆ.
ಗುರುದೇವ ಶ್ರೀ ರವಿಶಂಕರ್ ಹೇಳುವಂತೆ, ‘ಒಬ್ಬ ಆತ್ಮಜ್ಞಾನಿ ಗುರುವಿನ ಸಾನ್ನಿಧ್ಯದಲ್ಲಿ ಮಾತ್ರ ಜ್ಞಾನ ವೃದ್ಧಿಯಾಗುವುದು. ದುಃಖ ಮತ್ತು ತೊಂದರೆಗಳು ಕಡಿಮೆಯಾಗುವುದು. ಯಾವುದೇ ಕಾರಣವಿಲ್ಲದೆ ಆನಂದದ ಅನುಭೂತಿಯಾಗುತ್ತದೆ, ಸಮೃದ್ಧಿ ಉಂಟಾಗುತ್ತದೆ ಮತ್ತು ನಮ್ಮಲ್ಲಿನ ಪ್ರತಿಭೆಗಳು ಪ್ರಕಟವಾಗುತ್ತವೆ. ನಾವು ಎಷ್ಟು ಉತ್ತಮವಾಗಿ ಗುರುವಿನೊಂದಿಗೆ ಸಂಪರ್ಕವನ್ನು ಹೊಂದುತ್ತಿವೊ ಅಷ್ಟು ಸುಂದರವಾಗಿ ನಮ್ಮ ಬದುಕು ಚಿಗುರೊಡೆಯುವುದು. ಜೀವನ ಪ್ರಗತಿಯ ಮಾರ್ಗವನ್ನು ಕಂಡುಕೊಳ್ಳುವುದು’ ಎನ್ನುತ್ತಾರೆ. ನಿಜಕ್ಕೂ ಇಂದು ನಾವೆಲ್ಲ ಅರಿತು, ಅನುಸರಿಸಬೇಕಾದ ನುಡಿ ಇದಾಗಿದೆ.
“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂಬ ದಾಸರ ನುಡಿಯಂತೆ ಗುರುವಿಗೆ ಮನಃಪೂರ್ವಕವಾಗಿ ಗೌರವ ಸಲ್ಲಿಸುವ ಮನೋಭಾವ ಯಾವ ವ್ಯಕ್ತಿಯಲ್ಲಿ ಜಾಗೃತ ವಾಗಿರುತ್ತದೆಯೋ, ಅಂತಹ ವ್ಯಕ್ತಿಯ ವ್ಯಕ್ತಿತ್ವ ಪ್ರಜ್ವಲಿಸುತ್ತದೆ. ನಮ್ಮ ಮನಸ್ಸು ಹೇಗೆ ಚಂದ್ರನೊಂದಿಗೆ ಸಂಬಂಧವನ್ನು ಹೊಂದಿದೆಯೋ ಹಾಗೇ ಗುರು ಪೂರ್ಣಿಮೆಯ ಈ ಹುಣ್ಣಿಮೆಯೊಂದಿಗೆ ಸಂಬಂಧವನ್ನು ಹೊಂದಿದೆ. ಇದು ಗುರುಗಳಿಗೆ ಗೌರವ ಸಲ್ಲಿಸುವ ದಿನ. ನಮ್ಮ ಜೀವನವನ್ನು ಅವಲೋಕನ ಮಾಡಿಕೊಳ್ಳಲು ಮತ್ತು ಜ್ಞಾನದ ಮಹತ್ವವನ್ನು ಗುರುತಿಸಲು ಇದು ಸುದಿನವಾಗಿದೆ. ಈ ಜ್ಞಾನವನ್ನು ಗೌರವಿಸಿದರೆ ಜೀವನವನ್ನು ಗೌರವಿಸಿದಂತೆ. ಜೀವನವು ನಮಗೆ ಅನೇಕ ಪಾಠಗಳನ್ನು ಕಲಿಸಿದೆ.
ಜೀವನ ಮತ್ತು ಗುರುವಿನ ಮಧ್ಯೆ ಒಂದು ಅವಿನಾಭಾವ ಸಂಬಂಧವಿದೆ. ಆದರೆ ಆಗಾಗ ನಾವು ನಮ್ಮ ಗಮನವನ್ನು ಇದರಿಂದ ಬೇರೆಡೆಗೆ ತಿರುಗಿಸಿ ನಮ್ಮ ಆಸೆ ಆಕಾಂಕ್ಷೆಗಳಲ್ಲೇ ಮುಳುಗಿ, ಜ್ಞಾನವನ್ನು ನಿರ್ಲಕ್ಷಿಸುತ್ತೇವೆ. ಬದುಕಿನ ಜಂಜಾಟದಲ್ಲಿ ನಮ್ಮ ಜೀವನಕ್ಕೆ ಅಗತ್ಯವೆನಿಸಿದ ಕೆಲವು ಮಹತ್ವದ ಅಂಶಗಳನ್ನು ಮರೆತು ನಿರ್ಲಿಪ್ತ ಜೀವನದ ಕಡೆ ನಡೆದು ಬಿಡುತ್ತೇವೆ. ಅದರ ಬದಲು ಗುರುವಿನ ಜೊತೆ ನಡೆಯುತ್ತ, ಅವರ ಸಲಹೆ-ಸೂಚನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಗಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ.
ಗುರುಪೂರ್ಣಿಮೆಯ ಈ ಶುಭ ದಿನದಂದು ಜ್ಞಾನದ ದೀಪವನು ಎಲ್ಲೆಡೆ ಪಸರಿಸಿ, ನಮ್ಮ ಜೀವನವನ್ನು ಗುರುವಿನ ಮಾರ್ಗದರ್ಶನದೊಂದಿಗೆ ಸಾಕ್ಷಾತ್ಕಾರ ಗೊಳಿಸಿಕೊಳ್ಳುವ ಸಂಕಲ್ಪ ಮಾಡೋಣ. ಗುರುಪೂರ್ಣಿಮೆಯನ್ನು ಶ್ರದ್ಧೆಯಿಂದ ಆಚರಿಸೋಣ.

ವಿಶೇಷ ಲೇಖನ-
ರೇಷ್ಮಾ ಉಮೇಶ,
ಶಿಕ್ಷಕರು, ಶ್ರೀವಲ್ಲಿ ಪ್ರೌಢಶಾಲೆ, ಚಿತ್ರಾಪುರ
Guru Poornima Special
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ



