ಭಟ್ಕಳ ಡೈರಿ ವರದಿ
ಕಾರವಾರ: ತಾಲೂಕಿನ ಕಡವಾಡ ಸಾರ್ವಜನಿಕ ಸ್ಮಶಾನದಲ್ಲಿ ಶವ ಸಂಸ್ಕಾರಕ್ಕೆ ಬಳಸುವ ಕಬ್ಬಿಣದ ಕಂಬಗಳು ಹಾಗೂ ಸಲಾಕೆಗಳು ತುಕ್ಕು ಹಿಡಿದು ಮುರಿದು ಬಿದ್ದಿರುವುದರಿಂದ ಅಂತ್ಯಸಂಸ್ಕಾರಕ್ಕೆ ಬರುವ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಹಲವು ವರ್ಷಗಳಿಂದ ಸ್ಮಶಾನದ ಚಿತಾಗಾರದಲ್ಲಿರುವ ಕಬ್ಬಿಣದ ಕಂಬಗಳು ಹಾಳಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರವಾರ ನಗರ ಘಟಕದ ಅಧ್ಯಕ್ಷ ರಾಜಾ ನಾಯ್ಕ ಆರೋಪಿಸಿದ್ದಾರೆ.
ಕಬ್ಬಿಣದ ಕಂಬಗಳು ಮುರಿದು ಬಿದ್ದಿರುವ ಕಾರಣ ಶವ ಸಂಸ್ಕಾರದ ಸಂದರ್ಭದಲ್ಲಿ ಕಟ್ಟಿಗೆಗಳನ್ನು ಸರಿಯಾಗಿ ಜೋಡಿಸಲು ಸಾಧ್ಯವಾಗದೆ, ದೊಡ್ಡ ಕಲ್ಲುಗಳನ್ನು ಬಳಸುವ ಅನಿವಾರ್ಯತೆ ಎದುರಾಗಿದೆ. ಮೃತರ ಅಂತಿಮ ಸಂಸ್ಕಾರವನ್ನು ಗೌರವಯುತವಾಗಿ ನೆರವೇರಿಸಲು ಅಗತ್ಯ ಮೂಲಸೌಕರ್ಯವೂ ಇಲ್ಲದಂತಾಗಿದೆ. ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಿದ್ದರೂ ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ಗ್ರಾಮಸ್ಥರು ಬೇಸತ್ತಿದ್ದಾರೆ ಎಂದು ರಾಜಾ ನಾಯ್ಕ ತಿಳಿಸಿದ್ದಾರೆ.
ಸ್ಮಶಾನದ ಮೂಲಸೌಕರ್ಯಕ್ಕಾಗಿ ಸಾರ್ವಜನಿಕರಿಂದ ಮನೆಮನೆಗೆ ತೆರಳಿ ಹಣ ಸಂಗ್ರಹಿಸಿ ಕಬ್ಬಿಣದ ಕಂಬ ಹಾಗೂ ಸಲಾಕೆಗಳನ್ನು ನಿರ್ಮಿಸಲು ಮುಂದಾಗಿರುವ ಮಾಹಿತಿ ಕೇಳಿಬರುತ್ತಿದೆ. ಸಾರ್ವಜನಿಕರಿಂದ ಹಣ ಸಂಗ್ರಹಿಸುವ ಬದಲು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳು ಹಾಗೂ ಜಿಲ್ಲಾಡಳಿತವೇ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇದಲ್ಲದೆ, ಕಡವಾಡ ಸ್ಮಶಾನದಲ್ಲಿ ಸಮರ್ಪಕ ಸೂರು ವ್ಯವಸ್ಥೆಯೂ ಇಲ್ಲ. ನೂತನ ಚಿತಾಗಾರ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದರೂ ಅರ್ಧದಲ್ಲೇ ಸ್ಥಗಿತಗೊಂಡು ನೆನೆಗುದಿಗೆ ಬಿದ್ದಿದೆ ಎಂದು ಆರೋಪಿಸಲಾಗಿದೆ.
ಮೃತರ ಅಂತಿಮ ಸಂಸ್ಕಾರಕ್ಕೆ ಕನಿಷ್ಠ ಮೂಲಸೌಕರ್ಯ ಕಲ್ಪಿಸುವುದು ಆಡಳಿತದ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ಸ್ಮಶಾನದ ಅವ್ಯವಸ್ಥೆ ಸರಿಪಡಿಸುವ ಜೊತೆಗೆ ಅರ್ಧಕ್ಕೆ ನಿಂತಿರುವ ಚಿತಾಗಾರ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ರಾಜಾ ನಾಯ್ಕ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:
ಭಟ್ಕಳದಲ್ಲಿ ವನ್ಯಜೀವಿ ಸಪ್ತಾಹಕ್ಕೆ ಚಾಲನೆ; ಉರಗ ರಕ್ಷಕರಿಗೆ ಸನ್ಮಾನ
ಓಸಿ ಮಟ್ಕಾ ಜೂಜಾಟ ಆರೋಪ: ಇಬ್ಬರ ವಿರುದ್ಧ ಪ್ರಕರಣ
ದಸರಾ ಋತುವಿನಲ್ಲೇ ಬೆಂಗಳೂರು–ಕಾರವಾರ ಹಗಲು ರೈಲು ಸೇವೆ ರದ್ದು
ಕಳೆದೊಂದು ವಾರದ ಭಟ್ಕಳ: ಪೊಲೀಸ್ ಪ್ರಕರಣಗಳಿಂದ ಕ್ರೀಡಾ ಸಾಧನೆವರೆಗೆ ಏನಾಯಿತು?




