ಭಟ್ಕಳ: ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸೂಚನೆ ಮೇರೆಗೆ ಸೆ ೧೩ರಂದು ತಾಲೂಕಾ ನ್ಯಾಯಾಲಯಗಳ ಸಂಕೀರ್ಣದಲ್ಲಿ ಬೃಹತ್ ಲೋಕ ಅದಾಲತ್ (Lok Adalat) ಹಮ್ಮಿಕೊಳ್ಳಲಾಗಿದ್ದು, ಕಕ್ಷಿದಾರರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಹಾಗೂ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ ಹೇಳಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅವರು ಭಟ್ಕಳದ (Bhatkal) ನ್ಯಾಯಾಲಯದ ಆವರಣದಲ್ಲಿ ಸುದ್ದಿಗಾರರಿಗೆ ವಿಷಯ ತಿಳಿಸಿ, ಲೋಕ ಅದಾಲತ್‌ (Lok Adalat)ನಲ್ಲಿ ರಾಜೀಯಾಗತಕ್ಕ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಅವಕಾಶವಿದ್ದು ಕಕ್ಷಿದಾರರು, ನ್ಯಾಯವಾದಿಗಳು ಮುಂದೆ ಬಂದು ತಾಲೂಕಾ ಕಾನೂನು ಸೇವಾ ಸಮಿತಿಯ ಮೂಲಕ ಲೋಕ ಅದಾಲತ್‌ಗೆ ಪ್ರಕರಣವನ್ನು ತರುವಂತೆಯೂ ಕೋರಿದ್ದಾರೆ.
ಸೆ ೧೩ರಂದು ನಡೆಯಲಿರುವ ಬೃಹತ್ ಲೋಕ ಅದಾಲತ್‌ನಲ್ಲಿ ಇತ್ಯರ್ಥ ಪಡಿಸಲು ವಕೀಲರ ಸಂಘದ ಸಹಯೋಗದೊಂದಿಗೆ ೧೫೦೮ ಪ್ರಕರಣಗಳನ್ನು ಗುರುತಿಸಲಾಗಿದೆ. ಇನ್ನೂ ಹೆಚ್ಚಿನ ಪ್ರಕರಣಗಳು ಬರುವ ಸಾಧ್ಯತೆ ಇದ್ದು ಕಕ್ಷಿದಾರರು ಕೂಡಾ ರಾಜಿಯಾಗತಕ್ಕ ಪ್ರಕರಣಗಳನ್ನು ತಮ್ಮ ವಕೀಲರ ಮೂಲಕ ಇಲ್ಲವೇ ನೇರವಾಗಿ ಕಾನೂನು ಸೇವಾ ಸಮಿತಿಯ ಮೂಲಕ ಲೋಕ ಅದಾಲತ್‌ನಲ್ಲಿ ತಂದು ರಾಜೀ ಮಾಡಿಕೊಳ್ಳಬಹುದು ಎಂದು ತಿಳಿಸಿದ ಅವರು, ಪ್ರಸ್ತುತ ದಾಖಲಾಗಿರುವ ಪ್ರಕರಣಗಳಲ್ಲಿ ಪಕ್ಷಗಾರರಿಗೆ ಹೊರೆಯಾಗದಂತೆ ಎರಡೂ ಪಕ್ಷಗಾರರ ಒಪ್ಪಿಗೆಯ ಮೇರೆಗೆ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗುವುದು ಎಂದಿದ್ದಾರೆ.

ಇದನ್ನೂ ಓದಿ: Followup/ ಮದುವೆ ಮನೆಯಲ್ಲಿ ಸೂತಕದ ಛಾಯೆ

ಇಲ್ಲಿ ಪ್ರಕರಣ ಒಮ್ಮೆ ರಾಜೀಯಾಗಿ ಇತ್ಯರ್ಥವಾದರೆ ಅವುಗಳಿಗೆ ಅಪೀಲು ಕೂಡ ಇರುವುದಿಲ್ಲ ಮತ್ತು ನ್ಯಾಯಾಲಯಕ್ಕೆ ಕಟ್ಟಿದ ಕೋರ್ಟ ಫೀ ಕೂಡ ಪರತ್ ದೊರೆಯುವುದರಿಂದ ಕಕ್ಷಿದಾರರಿಗೆ ಹೊರೆಯಾಗುವದಿಲ್ಲ. ರಾಜೀ ಸಂಧಾನದ ಮೂಲಕ ಪ್ರಕರಣ ಇತ್ಯರ್ಥವಾಗುವುದರಿಂದ ಪರಸ್ಪರ ಪಕ್ಷಗಾರರಲ್ಲಿನ ಸ್ನೇಹ ಉಳಿಯುವುದರಿಂದ ಸಮಾಜದಲ್ಲಿ ಉತ್ತಮ ವಾತಾವರಣ ಮೂಡುತ್ತದೆ. ಲೋಕ ಅದಾಲತ್‌ನಲ್ಲಿ ಐಪಿಸಿ, ರಾಜೀಯಾಗತಕ್ಕ ಕ್ರಿಮಿನಲ್ ಪ್ರಕರಣ, ಚೆಕ್ ಬೌನ್ಸ್ ಪ್ರಕರಣ, ಬ್ಯಾಂಕ್ ಸಾಲ ವಸೂಲಾತಿ, ಮೋಟಾರು ವಾಹನ ಕಾಯಿದೆ ಉಲ್ಲಂಘನೆ ಪ್ರಕರಣ, ವಾಂಟಣಿ ಪ್ರಕರಣ, ಜಮೀನು ಸ್ವಾಧೀನ ಪ್ರಕರಣ, ಎಕ್ಸಿಕ್ಯೂಶನ್ ಪ್ರಕರಣ, ಮೊಟಾರು ವಾಹನ ಅಪಘಾತ ಪ್ರಕರಣ ಸೇರಿದಂತೆ ಇನ್ನೂ ಅನೇಕ ಪ್ರಕರಣಗಳು ರಾಜೀಯಾಗತಕ್ಕವಾಗಿದ್ದು ಪಕ್ಷಗಾರರು ನ್ಯಾಯಾಲಯದ ಆವರಣದಲ್ಲಿರುವ ಕಾನೂನು ಸೇವಾ ಸಮಿತಿಯನ್ನು ಸಂಪರ್ಕಿಸಬಹುದು ಎಂದೂ ತಿಳಿಸಿದ್ದಾರೆ.

ಇದನ್ನೂ ಓದಿ: Bhatkal police arrest/ ಮೂವರು ಯುವಕರನ್ನು ಜೈಲಿಗಟ್ಟಿದ ಭಟ್ಕಳದ ಪೊಲೀಸರು 

ಈ ಸಂದರ್ಭದಲ್ಲಿ ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶೆ ದೀಪಾ ಅರಳಗುಂಡಿ, ಹೆಚ್ಚುವರಿ ನ್ಯಾಯಾಧೀಶೆ ಧನವತಿ ಉಪಸ್ಥಿತರಿದ್ದರು.

ಇದನ್ನೂ ಓದಿ: Dakke Kunita/ ದುಬೈಗೆ ತೆರಳಲಿದೆ ಭಟ್ಕಳದ ಡಕ್ಕೆ ಕುಣಿತ