ಭಟ್ಕಳ: ಕಿತ್ರೆ ದೇವಿಮನೆ ದೇವಿ ದೇವಸ್ಥಾನ ಜಾಗೃತ ಭಕ್ತ ವರ್ಗವನ್ನು ಹೊಂದಿದ್ದು, ಇದು ದಿವ್ಯ ಸ್ವರೂಪ ಹೊಂದಿದ ಕ್ಷೇತ್ರವಾಗಿದೆ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ (Raghaveshwara Sri) ಹೇಳಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅವರು ಕಿತ್ರೆ ದೇವಿಮನೆಯಲ್ಲಿ ಮಂಗಳವಾರ ವರ್ಧಂತ್ಯುತ್ಸವ, ರಥೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ಧಾರ್ಮಿಕ ಸಭೆಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಿತ್ರೆಯ ದೇವಿಮನೆ ಕ್ಷೇತ್ರ ಸ್ವಯಂಭೂ ಲಿಂಗ ಹೊಂದಿರುವ ಪುಣ್ಯ ಕ್ಷೇತ್ರವಾಗಿದೆ. ದೇವಿಮನೆ ದುರ್ಗಾಪರಮೇಶ್ವರಿ ದೇವಸ್ಥಾನ ವಿಷ್ಣು, ಈಶ್ವರ, ದುರ್ಗೆ ಹೀಗೆ ಮೂರು ಸ್ವರೂಪ ಹೊಂದಿರುವ ದಿವ್ಯಸ್ವರೂಪ ಹೊಂದಿದೆ. ಸರ್ವಶಕ್ತಿ ಹೊಂದಿರುವ ಶ್ರೀ ಕ್ಷೇತ್ರದಲ್ಲಿ ಭಕ್ತರ ಬೇಡಿಕೆ ಈಡೇರುತ್ತದೆ.  ಈ ದೇವಿಯಲ್ಲಿ ಭಕ್ತಯಿಂದ ಬೇಡಿಕೊಂಡರೆ ಸರ್ವ ಸಮಸ್ಯೆಗೂ ಪರಿಹಾರ ಸಿಗಲಿದೆ. ನಮ್ಮಲ್ಲಿರುವ ಎಲ್ಲಾ ಭಯವೂ ದೂರವಾಗಲಿದೆ ಎಂದ ಅವರು (Raghaveshwara Sri) ಹೇಳಿದರು.

ಇದನ್ನು ಓದಿ: Rathotsava/ ಶ್ರೀ ಕ್ಷೇತ್ರ ಕಿತ್ರೆಯಲ್ಲಿ ರಥೋತ್ಸವ 

ಕುಲದೇವಿ ಎಂದಿಗೂ ಬದುಕಿನ ತಾಯಿ ಇದ್ದಂತೆ. ಈಕೆಯನ್ನು ಸಮರ್ಪಣಾ ಭಾವದಿಂದ ಬೇಡಿಕೊಳ್ಳಬೇಕು. ಹಿಂದಿದ್ದ ದೇವಿಮನೆಗೂ ಈಗಿನ ದೇವಿಮನೆಗೂ ಅಜಗಜಾಂತರ ವ್ಯತ್ಯಾಸವಿದೆ. ಇಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಎಲ್ಲರ ಸಹಕಾರದಿಂದ ಕ್ಷೇತ್ರ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ. ಹಳೇ ದೇವಸ್ಥಾನವೊಂದು ಹೇಗೆ ಅಭಿವೃದ್ಧಿಯಾಗಿದೆ ಎನ್ನುವುದನ್ನು ದೇವಿಮನೆ ದೇವಸ್ಥಾನವೇ ಸಾಕ್ಷಿಯಾಗಿದೆ. ದೇವಿಮನೆಯಲ್ಲಿ ವಿಶಾಲ ಜಾಗವಿದ್ದು, ಇಲ್ಲಿ ಸದಾ ಭಕ್ತಿಭಾವ, ಶುಚಿತ್ವ, ಸ್ವಚ್ಛತೆ ಕಾಣಬಹುದು. ದಿವ್ಯ ಸ್ವರೂಪ ಹೊಂದಿರುವ ದೇವಿಮನೆ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಕಾಣಲಿದ್ದು, ಎಲ್ಲರ ಸಹಕಾರ ಅಗತ್ಯವೆಂದರು.

ಇದನ್ನು ಓದಿ: Raghaveshwara Sri / ಮರಂಬಳ್ಳಿಗೆ ರಾಘವೇಶ್ವರ ಶ್ರೀ ಭೇಟಿ; ಯೋಗನರಸಿಂಹ ದೇವಸ್ಥಾನ ವೀಕ್ಷಣೆ 

ದೇವಿಮನೆ ಆಡಳಿತ ಮಂಡಳಿಯಿಂದ ಸಾಧಕ ಪ್ರಶಸ್ತಿ ಪಡೆದ ಉದ್ಯಮಿ ಅಶೋಕ ಭಟ್ಟ ಮಾತನಾಡಿದರು. ದೇವಸ್ಥಾನದ ಮೊಕ್ತೇಸರ ಉಮೇಶ ಹೆಗಡೆ ಅವರು ಸಭಾ ಪೂಜೆ ನೆರವೇರಿಸಿ ಸ್ವಾಗತಿಸಿದರು. ದೇವಿಮನೆ ಆಡಳಿತ ಮಂಡಳಿ ಅಧ್ಯಕ್ಷ ವಿನಾಯಕ ಭಟ್ಟ ವರದಿ ವಾಚಿಸಿ, ವಂದಿಸಿದರು. ಶುಭಾ ದೇಸಾಯಿ ನಿರೂಪಿಸಿದರು. ಹವ್ಯಕ ಕ್ರೀಡೋತ್ಸವದಲ್ಲಿ ವಿಜೇರಾದವರಿಗೆ ಬಹುಮಾನ ವಿತರಿಸಲಾಯಿತು.

ಇದನ್ನು ಓದಿ: Raghaveshwara Shree/ ಶ್ರೀ ಕ್ಷೇತ್ರ ದೇವಿಮನೆಗೆ ರಾಘವೇಶ್ವರ ಶ್ರೀ ಆಗಮನ